ಮ್ಯಾಲಮೂಡ್, ಬರ್ನಾಡ್
1914-93. ಅಮೇರಿಕದ ಪ್ರಸಿದ್ಧ ಲೇಖಕ. ಕಾದಂಬರಿಕಾರ. ನ್ಯೂ ಯಾರ್ಕ್‍ನ ಬ್ರೂಕ್‍ಲಿನ್‍ನಲ್ಲಿ 1914 ಏಪ್ರಿಲ್ 26ರಂದು ಜನಿಸಿದ. ಇವನ ತಂದೆ ಶಾಯಿಗಳು ರಷ್ಯದಿಂದ ಅಮೆರಿಕಕ್ಕೆ ವಲಸೆ ಬಂದು ನೆಲೆಸಿದ್ದರು. ಆರಂಭದ ಶಿಕ್ಷಣವನ್ನು ನ್ಯೂ ಯಾರ್ಕ್‍ನ ಸಿಟಿ ಕಾಲೇಜಿನಲ್ಲಿ ಪಡೆದು 1936ರಲ್ಲಿ ಬಿ.ಎ. ಪದವಿ ಗಳಿಸಿದ. 1942ರಲ್ಲಿ ಕೊಲಂಬಿಯ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದ. ಒಂದು ಫ್ರೌಢಶಾಲೆಯಲ್ಲಿ ಕೆಲಕಾಲ ಅಧ್ಯಾಪಕನಾಗಿ ಕೆಲಸಮಾಡಿದ. ಅನಂತರ ಒರಗಾನ್ ಸೇಟ್ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕನಾಗಿ ಕೆಲಸ ಮಾಡಿದ (1949-61) ಅನಂತರ ಹಾರ್ವಡ್, ಕೇಂಬ್ರಿಡ್ಜ್, ಮಸಾಚುಸೆಟ್ಸ್ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಆಧ್ಯಾಪಕನಾಗಿದ್ದ (1966-68) ಅನ್ನೆ ದ ಚಿಯಾರ ಎಂಬಾಕೆಯನ್ನು ಮದುವೆ ಆದ (1945). ಇವರಿಗೆ ಇಬ್ಬರು ಮಕ್ಕಳಾದರು.

ಜ್ಯೂಯಿಷ್ ಹಿನ್ನೆಲೆಯ ಅಮೆರಿಕನ್ ಕಾದಂಬರಿಕಾರರಲ್ಲಿ ಮ್ಯಾಲಮೂಡ್‍ನಿಗೆ ಒಂದು ವಿಶೇಷ ಸ್ಥಾನವಿದೆ. ಈತ ದಿ ನ್ಯಾಚುರಲ್ (1952), ದಿ ಅಸಿಸ್ಟೆಂಟ್ (1957). ಎ ನ್ಯೂ ಲೈಪ್ (1961), ದಿ ಫಿಕ್ಸರ್ (1966), ದಿ ಟೆನೆಂಟ್ಸ್ (1971), ಡ್ಯೂವಿನ್ಸ್ ಲೈಫ್ (1979) ಎಂಬ ಕಾದಂಬರಿಗಳನ್ನೂ ದಿ ಮ್ಯಾಜಿಕ್ ಬ್ಯಾರಲ್ (1958), ಈಡಿಯಟ್ಸ್ ಫಸ್ಟ್ (1963), ಪಿಕ್ಚರ್ಸ್ ಆಫ್ ಫಿಡಲ್‍ಮನ್ ಎನ್ ಎಕ್ಸಿಬಿಷನ್ (1969) ಎಂಬ ಕಥಾ ಸಂಕಲನಗಳನ್ನೂ ಪ್ರಕಟಿಸಿದ್ದಾನೆ.

ದಿ ನ್ಯಾಚುರಲ್ ಇವನ ಮೊದಲ ಕಾದಂಬರಿ. ಇದರಲ್ಲಿ ಅಮೆರಿಕನ್ನರ ಬೇಸ್ ಬಾಲ್ ಅಟದ ಬಗೆಗಿನ ಗೀಳನ್ನು ವ್ಯಂಗ್ಯವಾಗಿ ತಮಾಷೆಮಾಡಿ ಬರೆಯಲಾಗಿದೆ. ಈ ಕಾದಂಬರಿ ಪೌರಾನಿಕ ಪ್ರತೀಕ ಮತ್ತು ಪ್ರತಿಮೆಗಳಿಂದ ತುಂಬಿಹೋಗಿದೆ. ದಿ ಅಸಿಸ್ಟೆಂಟ್ ಕಾದಂಬರಿಯಲ್ಲಿ ಇಟಲಿಯಿಂದ ಬಂದು ಅಮೆರಿಕದಲ್ಲಿ ನೆಲೆಸಿದ ಯುವಕನೊಬ್ಬ ಒಂದು ಯಹೂದಿ ಕುಟುಂಬದ ಮಧ್ಯೆ ಬದುಕಿದ್ದರಪರಿಣಾಮವಾಗಿ ಪಡೆದ ಅನುಭವಗಳನ್ನು ಚಿತ್ರಿಸಲಾಗಿದೆ. ಇದೊಂದು ಟ್ರಾಜಿಕಾಮಿಡಿ. ಹಲವಾರು ವಿಮಶ್ಕರ ಪ್ರಕಾರ ಇದು ಇವನ ಕಾದಂಬರಿಗಳಲ್ಲಿ ಅತ್ಯುತ್ತಮ ಕೃತಿಯಾಗಿದೆ. ಎ ನ್ಯೂಲೈಪ್ ಕಾದಂಬರಿ ಹೆಚ್ಚು ಜನಪ್ರಿಯವಾದದ್ದು; ಇದರಲ್ಲಿ ಅಕಾಡೆಮಿಕ್ ಪ್ರಪಂಚದಲ್ಲಿ ಬಂಧಿತನಾಗಿ ಯಾತನೆಯನ್ನು ಅನುಭವಿಸುತ್ತಿರುವ ಒಬ್ಬ ಇಂಗ್ಲಿಷ್ ಆದ್ಯಾಪಕನ ಸ್ಪಿರಿಚುಯಲ್ ಮರುಹುಟ್ಟನ್ನು ಚಿತ್ರಿಸಿದ್ದಾನೆ, ದಿ ಪಿಕ್ಸರ್ ಎಂಬ ಕಾದಂಬರಿಯಲ್ಲಿ ರಷ್ಯದ ಯಹೂದಿಗಳ ಅವಸ್ಥೆಯನ್ನು ದೃಷ್ಟಾಂತರೂಪದಲ್ಲಿ ಚಿತ್ರಿಸಲಾಗಿದೆ. ದಿ ಟೆನೆಂಟ್ಸ್ ಕಾದಂಬರಿ ಒಬ್ಬ ಮಧ್ಯವಯಸ್ಸಿನ ವ್ಯಕ್ತಿ ಒಂದು ವಠಾರದ ಮನೆಯಲ್ಲಿ ಜೀವಿಸುತ್ತ ಪ್ರತಿಕೂಲಪ್ರಪಂಚದಲ್ಲಿ ದಯೆಗಾಗಿ ನಡೆಸುವ ಹುಡುಕಾಟವನ್ನು ಚಿತ್ರಿಸುತ್ತದೆ. ಡ್ಯೂವಿನ್ಸ್ ಲೈಫ್ ಮ್ಯಾಲಮೂಡನ ಮಹತ್ವಾಕಾಂಕ್ಷೆಯ ಕಾದಂಬರಿ; ಇದು ಮದುವೆ ಮತ್ತು ದಾಂಪತ್ಯ ದ್ರೋಹದ ಕಥೆಯಾಗಿದೆ. ವಯಸ್ಸಾಗುತ್ತಿರುವ ಲೇಖಕ ಈ ಕಾದಂಬರಿಯ ನಾಯಕ; ಈ ಆಯಕ ಪುನರುಜ್ಜೀವನವನ್ನು ನಡೆಸುತ್ತಾನೆ. ಅದರೆ ಹಳಸಲು ಪ್ರಪಂಚದಿಂದ ಬಿಡುಗಡೆ ಪಡೆವ ಪ್ರಯತ್ನ ನಡೆಸುತ್ತಾನೆ. ಅದರೆ ಯಾಚನೆಯ ಅನುಭವದಿಂದ ನೈತಿಕ ಒಳನೋಟವನ್ನು ಪಡೆಯುತ್ತಾನೆ.

ಮ್ಯಾಲಮೂಡನ ಕೃತಿಗಳು ಸಾಮನ್ಯವಾಗಿ, ಏಕಾಕಿ ಅಲೆಮಾರಿಯೊಬ್ಬ ಜೀವನದ ಮತ್ತು ಸುಖದ ಗುಟ್ಟನ್ನು ಅರಿಯಲು ನಿರಂತರವಾಗಿ ಪ್ರಯತ್ನಿಸಿ ಕೊನೆಗೆ ಅತ ವಿಫಲನಾಗುವುದನ್ನು ಚಿತ್ರಿಸುತ್ತವೆ. ವಿನೋದ (ಕಾಮೆಡಿ) ಮತ್ತು ಭಯ (ಟೆರರ್) - ಇವುಗಳ ಮಧ್ಯದ ಸಂಬಂಧವನ್ನೂ ಸೊಲು ಗೆಲುವುಗಳ ಸಂಬಂಧವನ್ನೂ ಪುಕ್ಕಲುತನ ಮತ್ತು ಧೈರ್ಯಗಳ ಸಂಬಂಧವನ್ನೂ ವಿಶೇಷ ಒಳನೋಟದೊಂದಿಗೆ ಮ್ಯಾಲಮೂಡ್ ಚಿತ್ರಿಸುತ್ತಾನೆ. ತಪ್ಪು ಮತ್ತು ವಿನಾಶದ ಅಂಚಿನಲ್ಲಿ ಒಬ್ಬ ವ್ಯಕ್ತಿಯನ್ನು ಅಧುನಿಕ ಮನುಷ್ಯನ ಪ್ರತೀಕವೆನ್ನುವಂತೆ ಒಡೆದುಹೋದ ಕನಸುಗಳು ಮತ್ತು ಪ್ರೀತಿಗಾಗಿ ಹಾತೊರೆಯುವ ಅತ ತನ್ನನ್ನು ತಾನು ಅರಿಯುವ ಪ್ರಯತ್ನದಲ್ಲಿರುವಂತೆ ಚಿತ್ರಿಸಲಾಗಿದೆ.							
(ಟಿ. ಆರ್. ಆರ್. ಎಸ್)

ಜ್ಯೂಯಿಷ್ ಬದುಕನ್ನೇ ಕೇಂದ್ರ ವಸ್ತುವಾಗುಳ್ಳ ಇವನ ಸಣ್ಣ ಕಥೆಗಳಲಲಿ ದಿ ಮ್ಯಾಜಿಕ್ ಬ್ಯಾರಲ್, ಟೇಕ್ ಪಿಟಿ, ದಿ ಮೌರ್ನನರ್ಸ್, ಈಟಿಯಟ್ಸ್ ಫಸ್ಟ್, ದಿ ಲಾಸ್ಟ್ ಮೊಹಿಕನ್ - ಇವು ಪ್ರಸಿದ್ಧವಾಗಿವೆ. ಯು. ಆರ್. ಅನಂvಮೂರ್ತಿಯವರ `ಮೌನಿ` ಎಮಬ ಕಥೆ ದಿ ಮೌರ್ನರ್ ಕಥೆಯನ್ನು ಅಧರಿಸಿ ರಚಿತವಾದದ್ದು ಎಂಬುದು ಕೆಲವು ವಿಮರ್ಶಕರ ಅಭಿಪ್ರಾಯ.

ಮ್ಯಾಲಮೂಡ್‍ಗೆ ಅನೇಕ ಗೌರವ, ಪ್ರಶಸ್ತಿಗಳು ಲಭ್ಯವಾಗಿವೆ. ರೊಡೆಂತಾಲ್ ಅವಾರ್ಡ್ (1958), (1959, 1967), ಪುಲಿಟ್ಸರ್ ಪ್ರಶಸ್ತಿ (1969), ಓ ಹೆನ್ರಿ ಅವಾರ್ಡ್ (1969). 1956 ರಲ್ಲಿ ಪಾರ್ಟಿಸನ್ ರಿವ್ಯೂ ಫೆಲೋಶಿಪ್, 1959 ಮತ್ತು 1960 ರಲ್ಲಿ ಪೋರ್ಡ್ ಫೌಂಡೇಶನ್ ಫೆಲೋಶಿಪ್‍ಗಳನ್ನು ಈತ ಗಳೀಸಿದ. ಅಮೆರಿಕದ ಲೈಬ್ರರಿ ಅಫ್ ಕಾಂಗ್ರೆಸ್ ಗ್ರಂಥಭಂಡಾರದಲ್ಲಿ ಈತನ ಹಸ್ತಪ್ರತಿಗಳ ಸಂಗ್ರಹವಿದೆ.									

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ